ಬುಕ್ ಪ್ರಿಯ ಅಂಬೇಡ್ಕರರು ಫೇಸ್ಬುಕ್ ಪ್ರಿಯ ಯುವಜನರು‌.



  " ದಿನಗಟ್ಟಲೇ ಆಹಾರವಿಲ್ಲದೆ ಇರಬಲ್ಲೆ ಆದರೆ ಪುಸ್ತಕಗಳಿಲ್ಲದೆ ನಾನು ಇರಲಾರೆ" ಎಂದು ಹೇಳಿ ತಮ್ಮ ಪುಸ್ತಕ ಪ್ರೇಮವನ್ನು ವ್ಯಕ್ತಪಡಿಸಿದ ಮಹಾನ್ ಚೇತನ ಡಾ// ಬಿಆರ್ ಅಂಬೇಡ್ಕರರು. ತಮ್ಮ ಪುಸ್ತಕಗಳಿಗಾಗಿಯೇ ಮುಂಬೈನಲ್ಲಿ ರಾಜಗೃಹ ಎಂಬ ಬೃಹತ್ ಬಂಗಲೆಯನ್ನು ಕಟ್ಟಿಸಿ ಸರಿಸುಮಾರು 50ಸಾವಿರಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳ ಸಂಗ್ರಹವನ್ನು ಮಾಡಿದ್ದರು. ಬಂಗಲೆಯ ಶೇಕಡ 80ರಷ್ಟು ಸ್ಥಳ ಪುಸ್ತಕಗಳಿಗೆ ಮೀಸಲಿಟ್ಟು ಉಳಿದ ಕೇವಲ 20ರಷ್ಟು ಸ್ಥಳವನ್ನು ತಮ್ಮ ವಾಸಕ್ಕಾಗಿ ಬಳಸುತ್ತಿದ್ದರು ಎಂಬುದನ್ನು ತಿಳಿದರೆ ಅಂಬೇಡ್ಕರರ ಪುಸ್ತಕ ಪ್ರೇಮದ ಅಗಾಧತೆ ಅರಿವಾಗುತ್ತದೆ. ತಮ್ಮ 22ನೆಯ ವಯಸ್ಸಿನಲ್ಲಿ ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವಾಗ ಒಂದು ಹೊತ್ತಿನ ಊಟವನ್ನು ಬಿಟ್ಟು 2000 ಪುಸ್ತಕಗಳನ್ನು ಖರೀದಿಸಿದ್ದು ಒಬ್ಬ ಜ್ಞಾನದಾಹಿಗೆ ಮಾತ್ರ ಸಾಧ್ಯವಾಗುವ ಕೆಲಸವಾಗಿದೆ.

ಅಂಬೇಡ್ಕರರ ಪುಸ್ತಕ ಭಂಡಾರದಲ್ಲಿ ಒಂದು ವೈವಿಧ್ಯಮಯ ಪ್ರಪಂಚವೇ ಅಡಗಿತ್ತು. ಏಕೆಂದರೆ ಪ್ರಪಂಚದಲ್ಲಿಯೇ ಇನ್ನೆಲ್ಲೂ ಲಭ್ಯವಿಲ್ಲ ಎನ್ನಬಹುದಾದ ಅನೇಕ ಅಮೂಲ್ಯ ಪುಸ್ತಕಗಳು ಅವರ ಭಂಡಾರದಲ್ಲಿದ್ದವು. ಅರ್ಥಶಾಸ್ತ್ರ, ಕಾನೂನು ಶಾಸ್ತ್ರ, ರಾಜಕೀಯ, ತತ್ವಶಾಸ್ತ್ರ, ಇತಿಹಾಸ, ಭೂಗೋಳ, ಎಲ್ಲ ಧರ್ಮಗಳ ಧರ್ಮಗ್ರಂಥಗಳು, ವಿಶ್ವದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ, ವಿವಿಧ ದೇಶಗಳ ಸಂವಿಧಾನ ಅಬ್ಬಬ್ಬಾ ಅಂಬೇಡ್ಕರ ಅಭಿರುಚಿ ಎಂತಹದ್ದು ಎಂದು ಈ ಪುಸ್ತಕಗಳೇ ತೋರಿಸಿಕೊಡುತ್ತವೆ. ವಿಶ್ವದ ಬೃಹತ್ ಗ್ರಂಥಾಲಯ ವಾದ ಬ್ರಿಟನ್ನಿನ 'ಲಂಡನ್ ಮ್ಯೂಸಿಯಂ ಲೈಬ್ರರಿ'ಯಿಂದ ಅತಿ ಹೆಚ್ಚು ಪುಸ್ತಕಗಳನ್ನು ಪಡೆದು ಓದಿರುವ ವಿದ್ಯಾರ್ಥಿ ಭಾರತದ ಅಂಬೇಡ್ಕರ್ ಎಂದು ಆ ಗ್ರಂಥಾಲಯದಲ್ಲಿ ದಾಖಲಾಗಿರುವ ವಿಷಯ ಅಂಬೇಡ್ಕರರ ಜ್ಞಾನದ ಹಸಿವಿನ ಚಿತ್ರಣವನ್ನು ಒದಗಿಸಿಕೊಡುತ್ತದೆ.
       

ಅಮೆರಿಕದಲ್ಲಿ ವಿದ್ಯಾರ್ಥಿಯಾಗಿದ್ದಾಗ ಅವರ ಪತ್ನಿಗೆ ಬರೆದ ಪತ್ರದಲ್ಲಿ "ಇಲ್ಲಿ ನಾನು ಅನ್ನ, ನೀರು,ಮೋಜು-ಮಸ್ತಿ ಎಲ್ಲದಕ್ಕೂ ಬೆನ್ನು ತಿರುಗಿಸಿ ಜ್ಞಾನದ ಅಗ್ನಿಕುಂಡದಲ್ಲಿ ನನ್ನನ್ನೇ ನಾನು ತಳ್ಳಿಕೊಂಡು ಬೇಯುತ್ತಿದ್ದೇನೆ" ಎಂದು ಬರೆದದ್ದು ಅಂಬೇಡ್ಕರರು ತಮ್ಮ ಯೌವ್ವನದ ಶಕ್ತಿಯನ್ನೆಲ್ಲ ಜ್ಞಾನ ಪಡೆಯುವುದರಲ್ಲಿಯೇ ವಿನಿಯೋಗಿಸಿದ್ದಾರೆ ಎಂಬ ವಿಷಯ ಮನದಟ್ಟಾಗುತ್ತದೆ. ಅಂಬೇಡ್ಕರ್ ಅವರಲ್ಲಿ ಪುಸ್ತಕಗಳನ್ನು ಓದಿ ಜೀರ್ಣಿಸಿಕೊಳ್ಳುವ ಮೇಧಾಶಕ್ತಿಯೂ  ಅಸಾಮಾನ್ಯವಾಗಿತ್ತು. ಅಧ್ಯಯನದಲ್ಲಿ ಅವರ ಏಕಾಗ್ರತೆ ಎಷ್ಟಿತ್ತೆಂದರೆ ಅವರು ಅಧ್ಯಯನದಲ್ಲಿ ಮಗ್ನರಾಗಿದ್ದಾಗ ಅವರನ್ನು ಕಾಣಲು ಬಂದ ಅತಿಥಿಗಳು ಅವರ ಮುಂದೆ ಕುಳಿತಿದ್ದರೂ ಸಹ ಅವರಿಗೆ ಗೊತ್ತಾಗುತ್ತಿರಲಿಲ್ಲ. ಅವರ ಜ್ಞಾಪಕಶಕ್ತಿ ಎಷ್ಟಿತ್ತೆಂದರೆ ಅವರು ಓದಿ ಮುಗಿಸಿದ ಪುಸ್ತಕದ ಯಾವ ಅಧ್ಯಾಯವನ್ನಾದರೂ ಜ್ಞಾಪಿಸಿಕೊಂಡು ಹೇಳಬಲ್ಲವರಾಗಿದ್ದರು ಎಂಬ ಸಂಗತಿ ಆಶ್ಚರ್ಯಚಕಿತರನ್ನಾಗಿಸುತ್ತದೆ


ಭಾರತೀಯ ಭಾಷೆಗಳಾದ 
ಮರಾಠಿ,ಗುಜರಾತಿ, ಹಿಂದಿ, ಪಂಜಾಬಿ, ಬಿಹಾರಿ,ಬೆಂಗಾಲಿ, ತೆಲುಗು, ತಮಿಳು ಭಾಷೆಗಳ ಜೊತೆಗೆ ವಿದೇಶಿ ಭಾಷೆಗಳಾದ ಇಂಗ್ಲಿಷ್, ಫ್ರೆಂಚ್, ಲ್ಯಾಟಿನ್, ಉರ್ದು ಹಾಗು ಪರ್ಷಿಯನ್ ಭಾಷೆಗಳ ಮೇಲೆ ಅಪಾರವಾದ ಪಾಂಡಿತ್ಯವನ್ನು ಹೊಂದಿದ್ದರು. ಅಂಬೇಡ್ಕರರು ಸಂಸ್ಕೃತ ಮತ್ತು ಪಾಳಿ ಭಾಷೆಗಳನ್ನು ಖಾಸಗಿಯಾಗಿ ಪಂಡಿತರನ್ನು ನೇಮಿಸಿಕೊಂಡು ಕಲಿತದ್ದು ವಿಶೇಷವಾಗಿದೆ. ಸಂಸ್ಕೃತ ಭಾಷೆಯಲ್ಲಿದ್ದ ವೇದೋಪನಿಷತ್ತುಗಳು, ಸ್ಮೃತಿಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ಮೂಲ ಗ್ರಂಥಗಳು ಹಾಗೂ ಪಾಳಿ ಭಾಷೆಯಲ್ಲಿದ್ದ ಎಲ್ಲಾ ಬೌದ್ಧ ಗ್ರಂಥಗಳನ್ನು ಅಧ್ಯಯನ ನಡೆಸಿದರು. ಇಷ್ಟೊಂದು ಭಾಷೆಗಳ ಮೇಲೆ ಪ್ರೌಡಿಮೆ ಹೊಂದಿದ್ದು ಆಯಾ ಭಾಷೆಗಳಲ್ಲಿದ್ದ ಶ್ರೇಷ್ಠ ಗ್ರಂಥಗಳನ್ನು ಓದುವುದಕ್ಕಾಗಿಯೇ ಎಂಬುದನ್ನು ನಾವು ಅರಿತುಕೊಳ್ಳಬೇಕು.       
   

ಓದುವ ಸಾಮರ್ಥ್ಯ ದಂತೆಯೇ ಅಂಬೇಡ್ಕರರ ಬರವಣಿಗೆ ಸಾಮರ್ಥ್ಯವು ಅಸಾಮಾನ್ಯವಾಗಿತ್ತು. ಸುಮಾರು 45 ವರ್ಷಗಳ ಕಾಲ ಸುದೀರ್ಘವಾಗಿ ನಡೆದ ಅವರ ಬರವಣಿಗೆ ಸುಮಾರು ಇಪ್ಪತ್ತುಸಾವಿರ ಪುಟಗಳನ್ನು ಮೀರಿತ್ತು ಎಂಬುದು ಅವರ ದೈತ್ಯ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ. ಯುಗಪುರುಷರಾದ ಅಂಬೇಡ್ಕರರು ತಮ್ಮ ಆಯುಷ್ಯದ ಪ್ರತಿಯೊಂದು ಕ್ಷಣವನ್ನು ಜ್ಞಾನ ಸಂಪಾದನೆ ಹಾಗೂ ಬರವಣಿಗೆಗೆ ಸದ್ವಿನಿಯೋಗ ಮಾಡಿಕೊಂಡ ಜ್ಞಾನ ಸಾಧಕರು. ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಪುಸ್ತಕಗಳ ರಾಶಿಯ ನಡುವೆಯೇ ಪುಸ್ತಕ ಪ್ರೇಮಿ ಅಂಬೇಡ್ಕರರು ತಮ್ಮ ಪ್ರಾಣವನ್ನು ತೊರೆದ ಸಂಗತಿ ಪುಸ್ತಕಗಳು ಮತ್ತು ಅಂಬೇಡ್ಕರರಿಗಿದ್ದ ಬಂಧನವನ್ನು ಸಾರಿ ಹೇಳುತ್ತದೆ.

ಬುಕ್ ಪ್ರಿಯ ಅಂಬೇಡ್ಕರರ ಬಗ್ಗೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಆದರೆ ಕೇವಲ ಲೈಕ್ ಕಾಮೆಂಟ್ಗಳಲ್ಲೇ ತಮ್ಮ ಯುವಶಕ್ತಿಯನ್ನು ವ್ಯಯ ಮಾಡುತ್ತಿರುವ ಫೇಸ್ಬುಕ್ ಪ್ರಿಯ ಯುವಕರ ಮುಂದಿನ ಭವಿಷ್ಯ ಆ ಮೂಲಕ ದೇಶದ ಭವಿಷ್ಯವನ್ನು ನೆನೆದರೆ ನಿಜಕ್ಕೂ ಭಯ ಆವರಿಸುತ್ತದೆ. ಕೇವಲ ಅರ್ಧಗಂಟೆ ಕೆಲಸ ಮಾಡಿ ಗಂಟೆಗಟ್ಟಲೇ ವಿರಾಮ ತೆಗೆದುಕೊಳ್ಳುವ, ಕಾಲು ಚಾಚಿ ಮೊಬೈಲ್ ಹಿಡಿದು ಉರಳಿಕೊಳ್ಳುವ ಇಂದಿನ ಯುವಜನರಿಗೆ ದಿನದ 21 ಗಂಟೆಗಳ ಕಾಲ ಅಭ್ಯಾಸದಲ್ಲಿ ತೊಡಗಿಕೊಂಡು ಜಗತ್ತಿನ ಎಲ್ಲ ಜ್ಞಾನವನ್ನು ಅರಗಿಸಿಕೊಂಡು ಸಂವಿಧಾನ ರಚಿಸಿದ ಅಂಬೇಡ್ಕರರ ಪುಸ್ತಕ ಪ್ರೀತಿ ಸ್ಪೂರ್ತಿದಾಯಕವಾಗಲಿ ಎಂದು ಆಶಿಸುತ್ತೇನೆ.

(RSPATIL Laxmeshwar)


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಿಮ್ಮ ಸೃಜನಶೀಲ ಪ್ರತಿಭೆಗೆ ಏಳು ಕೀಗಳು